Vidyanjali
  • Home
  • Vidyanjali's News
  • Blogs
  • ದಸರಾ ಗೊಂಬೆಹಬ್ಬ ಆದದ್ದು ಹೇಗೆ?

ದಸರಾ ಗೊಂಬೆಹಬ್ಬ ಆದದ್ದು ಹೇಗೆ?

ದಸರಾ ಗೊಂಬೆಹಬ್ಬ ಆದದ್ದು ಹೇಗೆ?

ಗೊಂಬೆಗಳ ಹಬ್ಬವನ್ನು ಎಲ್ಲಾ ರಾಜ್ಯಗಳಲ್ಲೂ ಮಾಡುತ್ತಿಲ್ಲ. ಭಾರತದಲ್ಲಿ ಕೆಲವೇ ರಾಜ್ಯಗಳಲ್ಲಿ ಮಾತ್ರ ದಸರಾ ಹಬ್ಬವನ್ನು ಗೊಂಬೆಗಳ ಹಬ್ಬವಾಗಿ ಆಚರಿಸಲಾಗುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಗಳಲ್ಲಿ ಮಾತ್ರ ದಸರಾ ಹಬ್ಬವನ್ನು ಗೊಂಬೆಗಳ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಗೊಂಬೆ ಹಬ್ಬವನ್ನು ಏತಕ್ಕಾಗಿ ಆಚರಿಸುತ್ತಾರೆ, ಎಂಬುದಕ್ಕೆ ಒಂದು ಕಥೆಯಿದೆ.

ಬಹಳ ಹಿಂದೆ ಒಬ್ಬ ರಾಕ್ಷಸ ಇದ್ದ. ಆ ರಾಕ್ಷಸನ ಹೆಸರು ರಂಬಾ ಅಂತ. ಒಂದು ಬಾರಿ ರಂಬಾ ಮಹಿಷಿ ರೂಪದಲ್ಲಿರುವಂತಹ ಒಬ್ಬ ರಾಕ್ಷಸಿಯನ್ನು ಮೋಹಿಸಿ ಮದುವೆ ಆಗುತ್ತಾನೆ. ಈ ರಾಕ್ಷಸ ದಂಪತಿಗಳಿಗೆ ಒಬ್ಬ ಮಗ ಹುಟ್ಟ್ ತಾನೆ ಅವನಿಗೆ ಕೋಣನ ಮುಖ ಇರುತ್ತೆ. ಅದಕ್ಕೆ ಅವನನ್ನ ಮಹಿಷಾಸುರ ಅಂತ ಕರೀತಾರೆ. ಮಹಿಷ ಅಂದರೆ ಕೋಣ, ಅಸುರ ಅಂದರೆ ರಾಕ್ಷಸ. ಮಹಿಷಾಸುರ ಅಂದರೆ ಕೋಣನ ಮುಖವಿರುವ ರಾಕ್ಷಸ ಅಂತ ಅವನ ಹೆಸರು. ಆ ಕಾಲದಲ್ಲಿ ರಾಕ್ಷಸರಿಗೂ ದೇವತೆಗಳಿಗೂ ಯಾವಾಗಲೂ ಯುದ್ಧ ನಡೀತಿತ್ತು.

ಪ್ರತಿಯೊಂದು ಯುದ್ಧದಲ್ಲೂ ರಾಕ್ಷಸರು ಸೋತುಕೊಂಡು ಬರ್ತಿದ್ರು. ಇದು ಈ ಮಹಿಷನಿಗೆ ಸ್ವಲ್ಪನೂ ಇಷ್ಟ ಆಗ್ತಾ ಇರಲಿಲ್ಲ. ಆಗ ಅವನು ಮಹಿಷ ತನ್ನ ತಂದೇನ ಕೇಳ್ತಾನೆ.

“ಅಪ್ಪಾ ಯಾಕೆ ದೇವತೆಗಳು ಯಾವಾಗಲೂ ನಮ್ಮನ್ನ ಸೋಲ್ಸ್ ತಾರೆ” ಅದಕ್ಕೆ ರಂಬಾ ಹೇಳ್ತಾನೆ.

“ಮಗು ಮಹಿಷ ನೀನು ದೊಡ್ಡೋನಾಗಿ ಬಲವಂತನಾಗಿ ಬಲಿಷ್ಟನಾಗು. ಆಗ ನೀನೇ ದೇವತೆಗಳನ್ನು ಸೋಲಿಸಬಹುದು” ಅಂತ.

ಮಹಿಷ ದೊಡ್ಡೋನಾಗ್ ತಾ ಹೋಗ್ತಾನೆ. ಅವನಿಗೆ ಯಾವಾಗಲೂ ಒಂದೇ ಯೋಚನೆ ದೇವತೆಗಳನ್ನ ಹೇಗೆ ಸೋಲಿಸಬೇಕು ಅಂತ. ಅವನಿಗೆ ದೇವತೆಗಳನ್ನ ಸೋಲಿಸಬೇಕು ಅನ್ನೋ ಆಸೆ ಇತ್ತೇ ಹೊರತು ಹೇಗೆ ಸೋಲಿಸ ಬೇಕು ಅಂತಾ ಗೊತ್ತಿರಲಿಲ್ಲ.

ಆ ಸಮಯದಲ್ಲಿ ಅವನಿಗೆ ನಾರದ ಮಹಿಷನಿಗೆ ಸಿಗ್ತಾರೆ. ನಾರದಮಹರ್ಷಿ ತ್ರಿಲೋಕ ಸಂಚಾರಿಗಳು. ಅವರಿಗೆ ಎಲ್ಲಾ ತಿಳಿದಿರುತ್ತೆ. ನಾರದ ಮಹರ್ಷಿಗಳು ಮಹಿಷನಿಗೆ ಬ್ರಹ್ಮನ್ನ ಕುರಿತು ತಪಸ್ಸು ಮಾಡಿ ಚಿರಂಜೀವಿ ಆಗೋ ವರಾನ ಕೇಳೋ ಉಪಾಯ ಹೇಳ್ಕೊಡ್ತಾರೆ. ಮಹಿಷ ಇದು ಒಳ್ಳೇ ಉಪಾಯ ಅಂತ ತಪಸ್ಸು ಮಾಡೋದಕ್ಕೆ ಕಾಡಿಗೆ ಹೋಗ್ತಾನೆ.

ಕಾಡಿಗೆ ಹೋದ ಮಹಿಷ ತಪಸ್ಸು ಮಾಡೋದಕ್ಕೆ ಪ್ರಾರಂಭಮಾಡ್ತಾನೆ. ಮೊದಲು ಬರೀ ಹಣ್ಣು ಹಂಪಲು ತಿಂದುಕೊಂಡು ತಪಸ್ಸು ಮಾಡೋದಕ್ಕೆ ಪ್ರಾರಂಭ ಮಾಡ್ತಾನೆ. ವರ್ಷಗಳು ಕಳೆಯತ್ತೆ. ಒಂದ್ವರ್ಷ ಆಗತ್ತೆ ಎರಡ್ವರ್ಷ ಆಗತ್ತೆ ಮೂರ್ವರ್ಷ ಆಗತ್ತೆ ಸುಮಾರು ವರ್ಷಗಳು ಕಳೆಯುತ್ತೆ ಆದರೆ ಏನು ಫಲಾನೆ ಸಿಗಲ್ಲ. ಆಮೇಲೆ ಮಹಿಷ ಬರೀ ನೀರು ಕುಡಿದು ತಪಸ್ಸು ಮಾಡೋದಕ್ಕೆ ಪ್ರಾರಂಭ ಮಾಡ್ತಾನೆ. ಮತ್ತೆ ವರ್ಷಗಳು ಉರುಳುತ್ತೆ. ಏನು ಪ್ರಯೋಜನ ಕಾಣಲ್ಲ. ಈಗ ಮಹಿಷನ ತಪಸ್ಸು ಮತ್ತೂ ಉಗ್ರ ಆಗತ್ತೆ. ಆತ ಈಗ ಒಂದೇ ಕಾಲಲ್ಲಿ ನಿಂತುಕೊಂಡು ತಪಸ್ಸು ಮಾಡೋದಕ್ಕೆ ಪ್ರಾರಂಭ ಮಾಡ್ತಾನೆ. ಏನು ಚಲನೆಇಲ್ದೀರ ಕದಲ್ದೀರ ತಪಸ್ಸುಮಾಡೋಕೆ ಪ್ರಾರಂಭಮಾಡ್ತಾನೆ. ಅವನು ಕದಲ್ದೆ ನಿಂತಿದ್ದರಿಂದ ಅವನ ಸುತ್ತ ಹುತ್ತಗಳು ಬೆಳ್ಕೊಳ್ಳತ್ತೆ. ಗಿಡಗಳು ಬಳ್ಳಿಗಳು ಅವನ ಮೈಮೇಲೆಲ್ಲಾ ಸುತ್ಕೊಳ್ಳತ್ತೆ. ಹಾವುಗಳು ಅವನ ಮೈಮೇಲೆ ಹರಿದಾಡೋಕೆ ಪ್ರಾರಂಭ ಆಗತ್ತೆ ಆದರೂ ಕೂಡ ಅವನು ತನ್ನ ಛಲ ಬಿಡದೀರ ಒಂದೇ ಕಾಲಲ್ಲಿ ನಿಂತುಕೊಂಡು ತಪಸ್ಸು ಮಾಡ್ತಾನೆ.

ಕಡೆಗೆ ಅವನು ಮುಖದಿಂದ ಓಂಕಾರದ ಜ್ವಾಲೆ, ಓಂಕಾರದ ಕಂಪನ ಎಲ್ಲಾ ಕಡೆ ಹರಿದು ಮೂಲೋಕಗಳಲೆಲ್ಲಾ ಪಸರಿಸಿ ಬ್ರಹ್ಮನನ್ನ ಅವನ ಲೋಕದಿಂದ ಎಳೆದು ಸೆಳೆದು ಅವನ ಮುಂದೆ ತಂದು ನಿಲ್ಲಿಸತ್ತೆ. ಬ್ರಹ್ಮ ಮಹಿಷನ ಮುಂದೆ ಪ್ರತ್ಯಕ್ಷನಾಗಿ “ವತ್ಸ ಯಾಕೆ ಈ ಘೋರ ತಪಸ್ಸು ನಿನಗೇನು ಬೇಕು ಹೇಳು” ಎಂದು ಕೇಳ್ತಾನೆ. ಆಗ ಮಹಿಷ “ತಂದೆ ನನಗೆ ಚಿರಂಜೀವಿ ಆಗುವಂತಹ ವರವನ್ನು ಕೊಡು” ಅಂತ ಕೇಳ್ತಾನೆ. ಬ್ರಹ್ಮ “ಈ ಭೂಮಿ ಮೇಲೆ ಹುಟ್ಟಿದಂತಹ ಪ್ರತಿಯೊಂದು ಜೀವಿಯು ಸಾಯಲೇ ಬೇಕಾದ್ದು. ಚಿರಂಜೀವಿಯಾಗುವಂತಹ ವರವನ್ನು ನಾನು ನಿನಗೆ ಕೊಡಲಾರೆ” ಅಂತ ಹೇಳ್ತಾನೆ. ಆಗ ಮಹಿಷಾಸುರನಿಗೆ ಬಹಳ ನಿರಾಶೆಯಾಗುತ್ತದೆ. ಆದರೂ ಸ್ವಲ್ಪ ಹೊತ್ತು ಯೋಚಿಸಿ “ತಂದೆಯೇ ನನ್ನನ್ನು ಯಾವ ಪ್ರಾಣಿಯೂ, ಯಾವ ಮಾನವನೂ ಯಾವ ರಾಕ್ಷಸನೂ ಕೊಲ್ಲಲಾರದಂತಹ ವರವನ್ನು ದಯಪಾಲಿಸು. ನನ್ನ ಸಾವು ಏನಿದ್ದರೂ ಕೇವಲ ಹೆಂಗಸಿನ ಕೈಯ್ಯಲ್ಲೇ ಇರುವಂತಾಗಲಿ” ಎಂದು ಕೇಳುತ್ತಾನೆ. ಅದಕ್ಕೆ ಬ್ರಹ್ಮ “ಹಾಗೇ ಆಗಲಿ ವತ್ಸ ತಥಾಸ್ತು.” ಎಂದು ಹರಸಿ ಅಂತರ್ಧಾನನಾಗುತ್ತಾನೆ. ಮಹಿಷ ತಾನು ಬಲಿಷ್ಠನೆಂಬ ಅಹಂಕಾರದಿಂದ ಹೆಣ್ಣು ಅಬಲೆ ಎಂಬ ನಿಕೃಷ್ಟತೆಯಿಂದ ಹೆಣ್ಣಿನಿಂದಲೇ ಸಾವಾಗಬೇಕೆಂದು ಬ್ರಹ್ಮನಿಂದ ವರವನ್ನು ಪಡೀತಾನೆ.

ವರವನ್ನು ಪಡೆದ ಮಹಿಷ ಭೂಮಿಯಲ್ಲಿ ಅಲ್ಲೋಲ ಕಲ್ಲೋಲವನ್ನು ಎಬ್ಬಿಸಿದ. ಭೂಮಿಯ ರಾಜರುಗಳನ್ನೆಲ್ಲಾ ಸೋಲಿಸಿ ಅವನ ದೃಷ್ಠಿ ಇಂದ್ರನ ಅಮರಾವತಿಯ ಮೇಲೆ ಹೋಯಿತು.

ಇಂದ್ರ ದೇವತೆಗಳ ರಾಜ. ಬಹಳ ವರ್ಷಗಳ ಕಾಲ ಮಹಿಷನಿಗೂ ದೇವತೆಗಳಿಗೂ ಯುದ್ಧ ನಡೆಯಿತು. ಯುದ್ಧದಲ್ಲಿ ಮಹಿಷ ಗೆದ್ದು ದೇವತೆಗಳು ದೇವಲೋಕವನ್ನು ಬಿಟ್ಟುಹೋಗುವಂತಾಯಿತು. ವರ್ಷಗಳವರೆಗೆ ದೇವತೆಗಳು ಕಾಡುಮೇಡುಗಳನ್ನು ಬೆಟ್ಟಗುಡ್ಡಗಳನ್ನು ಅಲೆಯ ಬೇಕಾಯ್ತು. ಕಡೆಗೆ ಅವರು ತ್ರಿಮೂರ್ತಿಗಳ ಮೊರೆ ಹೋಕ್ಕರು. ತ್ರಿಮೂರ್ತಿಗಳು ಬ್ರಹ್ಮ ವಿಷ್ಣು ಮಹೇಶ್ವರರು. ತ್ರಿಮೂರ್ತಿಗಳು ತಾವೇನೂ ಮಾಡಲು ಸಾಧ್ಯವಿಲ್ಲವೆಂದು ಹೇಳಿದರು. ಏಕೆಂದರೆ ಮಹಿಷನ ಸಾವು ಕೇವಲ ಓರ್ವ ಹೆಣ್ಣಿನಿಂದ ಆಗುವುದೆಂದು ಅಂತಹ ಶಕ್ತಿಶಾಲಿ ಹೆಣ್ಣು ಇನ್ನೂ ಹುಟ್ಟಿಲ್ಲವೆಂದು ಹೇಳಿದರು. ಆಗ ವಿಷ್ಣು ಓರ್ವ ಹೆಂಗಸನ್ನು ಸ್ತ್ರೀಯನ್ನು ಸೃಷ್ಟಿಸುವ ಆಲೋಚನೆಯನ್ನು ಮುಂದಿಟ್ಟರು. ಶಿವನ ಅಂಶದಿಂದ ಓರ್ವ ಸ್ತ್ರೀಯ ಸೃಷ್ಟಿಯಾಯಿತು. ಆಕೆಯ ಮುಖ ಶಿವನ ಅಂಶದಿಂದಲೂ, ದೇಹ ವಿಷ್ಣುವಿನ ಅಂಶದಿಂದಲೂ ಕಾಲ್ಗಳು ಬ್ರಹ್ಮನ ಅಂಶದಿಂದಲೂ ಆಯಿತು. ಹೀಗೆ ಪ್ರತಿಯೊಬ್ಬದೇವತೆಯೂ ತಂತಮ್ಮ ಅಂಶಗಳನ್ನು ಈ ಸ್ತ್ರೀ ಮೂರ್ತಿಗೆ ಧಾರೆ ಎರೆದು ಕೊಟ್ಟರು. ಈ ಸ್ತ್ರೀಯನ್ನು ಮಹಾಶಕ್ತಿ ಯೆಂದು ಘೋಷಿಸಲಾಯ್ತು ಎಲ್ಲಾ ದೇವತೆಗಳೂ ತಂತಮ್ಮ ಆಯುಧಗಳನ್ನು ಮಹಾಶಕ್ತಿಗೆ ಕೊಟ್ಟರು. ಶಿವನು ತನ್ನ ತ್ರಿಶೂಲವನ್ನು ವಿಷ್ಣುವು ಸುದರ್ಶನ ಚಕ್ರವನ್ನು ಬ್ರಹ್ಮನು ಕಮಂಡಲವನ್ನು ವಾಯುವು ತನ್ನ ಶಕ್ತಿಯನ್ನು ಅಗ್ನಿಯು ಸದಾಗ್ನಿಯನ್ನು ಕೊಟ್ಟರು. ಎಲ್ಲಾದೇವತೆಗಳೂ ತಮ್ಮ ಶಕ್ತಿಗಳನ್ನು ತಮ್ಮ ಅಂಶಗಳನ್ನು ಮಹಶಕ್ತಿಗೆ ಕೊಟ್ಟಾದ ಮೇಲೆ ತಾವು ಸ್ತಬ್ಧರಾಗಿ ನಿರ್ಜೀವಿಗಳಂತೆ ನಿರ್ಜೀವ ಗೊಂಬೆಗಳಂತೆ ನಿಂತುಬಿಟ್ಟರು.

ಮಹಾಶಕ್ತಿ ಹುಲಿಯನ್ನೇರಿ ಅಮರಾವತಿಗೆ ಹೊರಟಳು. ಈಗ ಅಮರಾವತಿ ಮಹಿಷನ ರಾಜಧಾನಿಯಾಗಿತ್ತು. ಮಹಿಷ ಮೊದಲು ಓರ್ವ ಸ್ತ್ರೀಯನ್ನು ಯುದ್ಧಭೂಮಿಯಲ್ಲಿ ನೋಡಿ ಅಪಹಾಸ್ಯಮಾಡಿದ. ಆದರೆ ಅತನಸೈನ್ಯವೆಲ್ಲಾ ಕೆಲವೇಸಮಯದಲ್ಲಿ ನುಚ್ಚು ನೂರಾದದ್ದನ್ನು ನೋಡಿ ತನ್ನ ವರದ ನೆನಪಾಯಿತು ಅವನಿಗೆ. ತನ್ನ ಸಾವು ಹೆಣ್ಣಿನಿಂದಲೇ ಎಂಬುದರ ಅರ್ಥ ಈಗವನಿಗೆ ತಿಳಿಯಿತು. ಒಂಬತ್ತು ದಿನಗಳ ಕಾಲ ಮಹಿಷಾಸುರನಿಗೂ ಮಹಾಶಕ್ತಿಗೂ ಘೋರಯುದ್ಧ ನಡೆಯಿತು. ಹತ್ತನೆಯ ದಿನ ಮಹಾಶಕ್ತಿ ಮಹಿಷಾಸುರನನ್ನು ಸಂಹರಿಸಿದಳು. ಈ ಒಂಬತ್ತು ದಿನಗಳ ಕಾಲ ಎಲ್ಲಾ ದೇವತೆಗಳೂ ಸ್ತಬ್ಧರಂತೆ ನಿಂತಿದ್ದರು. ಹತ್ತನೆಯ ದಿನ ಅವರಿಗೆ ತಮ್ಮ ತಮ್ಮ ಅಂಶಗಳು ಮರಳಿ ದೊರೆತವು.

ಒಂಬತ್ತು ದಿನಗಳ ಕಾಲ ದೇವತೆಗಳು ಗೊಂಬೆಗಳಾಗಿ ಸ್ತಬ್ಧರಾಗಿ ನಿಂತಿದ್ದರ ಪ್ರತೀಕವಾಗಿ ನಾವು ದಸರಾ ಹಬ್ಬ ದಸರಾ ಗೊಂಬೆಹಬ್ಬ ಎಂದು ಆಚರಿಸುತ್ತೇವೆ. ಇಂದಿನ ಮೈಸೂರು ಅಂದಿನ ಮಹಿಷಪುರ ಆಗಿತ್ತು. ಆಗ ಚಾಮುಂಡೇಶ್ವರಿ, ಮಹಾಶಕ್ತಿ ಹೇಗೆ ಮಹಿಷಪುರವನ್ನು ರಕ್ಷಿಸಿದಳೋ ಹಾಗೆ ಇಂದಿನ ಚಾಮುಂಡೇಶ್ವರಿ ಮೈಸೂರನ್ನು ರಕ್ಷಿಸುವಂತೆ ಆಗಲಿ ಎಂದು ಇಂದಿಗೂ ಮೈಸೂರು ಸಂಸ್ಥಾನದ ಅರಸರು ಇಂದಿಗೂ ದಸರಾವನ್ನುಆಚರಿಸುತ್ತಾ ಬಂದಿದ್ದಾರೆ ಇದು ಶ್ರೀಕೃಷ್ಣದೇವರಾಯನ ಕಾಲ ದಿಂದಲೂ ನಡೆದುಬಂದಿರುವಂತಹ ಸಂಪ್ರದಾಯ. ಇಂದಿಗೂ ಸಹ ಮೈಸೂರು ಪ್ರಾಂತ್ಯದ ಪ್ರತಿಯೊಂದು ಮನೆಯಲ್ಲೂ ದಸರಾ ಉತ್ಸವ ನಡೆಯುತ್ತಾ ಇದೆ.